ಜನನ - ೧೨ ನವಂಬರ-೧೮೯೨ ದೇವರ ಹಿಪ್ಪರಗಿ ವಿಜಾಪುರ ಜಿಲ್ಲೆ ತಂದೆ - ರಾಘಣ್ಣ ನಾಯಕ ತಾಯಿ - ಲಕ್ಷ್ಮೀಬಾಯಿ ಮೊಹರೆ ಹಣಮಂತರಾಯರು (೧೨ ನವಂಬರ -೧೮೯೨ - ೧೫ ಅಗಸ್ಟ ೧೯೬೦ ) ವಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ದೇವರ ಹಿಪ್ಪರಗಿ ಗ್ರಾಮದಲ್ಲಿ ಜನಿಸಿದರು. ಇಂದಿನ ಕಾಲದಲ್ಲಿ ಸ್ವಾರ್ಥ ಪ್ರೇಮ ವೈಕ್ತಿಕ ಹೆಸರು ಸಂಪಾದನೆಯ ಗುರಿ ಇಟ್ಟುಕೊಂಡವರ ಮದ್ಯದಲ್ಲಿ ಸ್ವಾರ್ಥ ತ್ಯಾಗ ದೇಶಪ್ರೇಮ ಅಳವಡಿಸಿಕೊಂಡವರಲ್ಲಿ ಮೊಹರೆಯವರು ಮಾದರಿಯಾಗುತ್ತಾರೆ. ಮೊಹರೆಯವರು ದೇಶಭಕ್ತರು, ಸ್ವಾತಂತ್ರ್ಯ ಹೋರಾಟಗಾರರು ,ಕಷ್ಟ ಸಹಿಷ್ಣುಗಳು,ಬಡವರ ಬಂಧು, ಸಂಘಟನಾ ಚತುರರು,ಸಂಪಾದಕರ ಸಂಪಾದಕರು ,"ಸಂಯುಕ್ತ ಕರ್ನಾಟಕ "ವೃತ್ತಪತ್ರಿಕೆಯನ್ನು ಮುನ್ನಡೆಸಿದವರು ಮಹಾತ್ಮಾ ಗಾಂಧಿಜಿಯವರ ಕಟ್ಟಾ ಅನುಯಾಯಿಗಳು ,ಪಂಡಿತ ಜವಾಹರಲಾಲ ನೆಹರು, ಡಾ.ಬಾಬುರಾಜೇಂದ್ರ ಪ್ರಸಾದ ರವರನ್ನು ಹತ್ತಿರದಿಂದ ಕಂಡವರು, ಅಖಂಡ ಕರ್ನಾಟಕದ ಕನಸನ್ನು ಕಂಡವರು. ಸ್ವಾತಂತ್ರ್ಯ ಪೂರ್ವ ಪತ್ರಿಕೆ ಯನ್ನು ಮುನ್ನಡೆಸಿದ್ದರಿಂದ ಪತ್ರಿಕಾ ಪ್ರಪಂಚದ ದೃವ ತಾರೆ ಎಂದರೆ ಅತಿಶಯಯೋಕ್ತಿಯಾಗಲಾರದು.ವಿಜಾಪುರದ "ಕರ್ನಾಟಕ ವೈಭವ " "ಸಂಯುಕ್ತ ಕರ್ನಾಟಕ " ದಿನಪತ್ರಿಕೆ ಕನ್ನಡದ ಡೈಜೆಸ್ಟ "ಕಸ್ತೂರಿ "ಮಾಸಪತ್ರಿಕೆ ಅವರ ಸಂಪಾದಕತ್ವದಲ್ಲಿ ಪ್ರಕಟವಾದವುಗಳಾಗಿವೆ.ಘನತೆವತ್ತ ಕರ್ನಾಟಕ ಸರ್ಕಾರವು ಅವರ ಸ್ಮರಣಾರ್ಥ ಪ್ರಶಸ್ತಿಯನ್ನು ನೀಡುತ್ತಿರುವದು ಅವರಿಗೆ ಸಂದ ಗೌರವ. ====ಮನೆತನದ ಇತಿಹಾಸ === ಉತ್ತರ ಕರ್ನಾಟಕದಲ್ಲಿ ಮನೆತನಕ್ಕೆ ಮಹತ್ವದ ಬೆಲೆ ಇದೆ ಇದನ್ನು ಸೂಚಿಸಲು ಅಡ್ಡ ಹೆಸರು ಅಥವಾ ಸರನೇಮ ಎಂದು ಕರೆಯುತ್ತಾರೆ.ಸಾಮಾನ್ಯವಾಗಿ ಕೆಲವು ವಂಶ ಪಾರಂಪರಿಕವಾಗಿ ಬಂದವುಗಳಾದರೆ,ಇನ್ನು ಕೆಲವು ಅವರ ಊರಿನ ಹೆಸರು ಇಲ್ಲವೆ ಅವರು ಬೆಳೆದ ಬೆಳೆಗಳು ಬಂದಂಥವಾಗಿರುತ್ತವೆ.ಎರಡನೆಯ ಗುಂಪಿನಲ್ಲಿ ವೃತ್ತಿ ಹಾಗು ಪ್ರವೃತ್ತಿಯಿಂದ ಬಂದ ಅಡ್ಡ ಹೆಸರುಗಳು ಆಗಿರುತ್ತವೆ,ಈ ಎರಡನೆಯ ಗುಂಪಿಗೆ ಸೇರಿದವರು ಮೊಹರೆ ಹಣಮಂತರಾಯರು.ದೇವರ ಹಿಪ್ಪರಗಿಯು ಪೇಶವೆಯವರ ಕಾಲದಲ್ಲಿ ಕಲಾದಗಿ ಜಿಲ್ಲೆಯ ಒಂದು ತಾಲೂಕ ಕೇಂದ್ರವಾಗಿತ್ತು.ಮೊಹರೆ ಹಣಮಂತರಾಯರ ಪೂರ್ವಜರು ಹೊನ್ನಾಕಟ್ಟಿ ಮಲ್ಲಾಪುರದ ವತನಿ ಕುಲಕರ್ಣಿಯವರಾಗಿದ್ದರು . ಪೇಶವೆ ಯವರ ಆಳಿಕೆಯಲ್ಲಿ ಸರಕಾರಿ ಕಾಗದ ಪತ್ರಗಳಿಗೆ ಮೊಹರು (ಮುದ್ರೆ ,ಸಿಕ್ಕಾ ) ಹಾಕುವ ಅಧಿಕಾರ ಸಿಕ್ಕಿದ್ದರಿಂದ ಕುಲಕರ್ಣಿ ಯವರು ಮೊಹರೆಯವರಾದರು.ದೇವರ ಹಿಪ್ಪರಗಿ ,ವಿಜಾಪುರ ಜಿಲ್ಲೆ, ಕರ್ನಾಟಕ ವೈಭವ ಮತ್ತು ಸಂಯುಕ್ತ ಕರ್ನಾಟಕ ದಿನಪತ್ರಿಕೆಗೆ ಮೊಹರೆ ಹಣಮಂತರಾಯರು ತಮ್ಮ ಮುದ್ರೆಯನ್ನು ಒತ್ತಿದ್ದು ಇತಿಹಾಸ .ಕಾಲಾನಂತರ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಹಿರಿಯರಾದ ಭೀಮಾಜಿ ಗುಂಡೊ ಮೊಹರೆಯವರು ತಮ್ಮ ಬಂಧುಗಳನ್ನು ಸೇರಿಕೊಳ್ಲಲು ನಿಡಗುಂದಿ ಗ್ರಾಮಕ್ಕೆ ಬಂದು ನೆಲೆಸಿದರು.ತದನಂತರ ತಮ್ಮ ಭಾಗ್ಯವನ್ನು ಅರಸುತ್ತಾ ತಾಲೂಕ ಕೇಂದ್ರವಾದ ದೇವರ ಹಿಪ್ಪರಗಿಗೆ ೧೭೪೦ ರಲ್ಲಿ ಬಂದು ನೆಲೆಯೂರಿದರು.ದೇವರಹಿಪ್ಪರಗಿಯ ಬಜಾರದಲ್ಲಿ ಒಂದು ಅಂಗಡಿಯನ್ನು ಬಾಡಿಗೆ ಪಡೆದು ಸಂತೆಯದಿನದಂದು ಚಿಲ್ಲರೆ ನಾಣ್ಯಗಳನ್ನು ವಿತರಿಸಿ ತಮ್ಮ ಬಟ್ಟಾ (ಕಮೀಶನ್)ಪಡೆಯುತ್ತಿದ್ದರಲ್ಲದೆ ಬಡ್ಡಿ ವ್ಯ್ವವಹಾರವನ್ನು ಪ್ರಾರಂಭಿಸಿದರು.ಭೀಮಾಜಿ ಮೊಹರೆ ಯವರು ತಮ್ಮ ಸಹೋದರರಾದ ಕೃಷ್ಣಪ್ಪ ಮೊಹರೆ ,ಯಲಗೂರದಪ್ಪನವರನ್ನು ಕರೆಸಿಕೊಂಡು ತಮ್ಮ ವ್ಯವಹಾರವನ್ನು ಇಮ್ಮಡಿ ಗೊಳಿಸಿದರು.ಕೃಷ್ಣ್ಪ್ಪ ಪ್ಪ ಮತ್ತು ರಾಧಾಬಾಯಿ ದಂಪತಿಗಳಿಂದ ರಾಘವೇಂದ್ರನ ಜನ್ಮವಾಯಿತು.ಹತ್ತನೇಯ ವಯಸ್ಸಿನಲ್ಲಿ ತಮ್ಮ ತಂದೆಯವರನ್ನು ಕಳೆದುಕೊಂಡನು.ರಾಘವೇಂದ್ರ ಲಾಲನೆ ಪಾಲನೆ ಯನ್ನು ಅವರ ದೊಡ್ಡಪ್ಪ ಭೀಮಾಜಿಯವರೆ ನೋಡಿಕೊಂಡರು.ಜಿಲ್ಲಾ ಕೇಂದ್ರವಾದ ಕಲಾದಗಿಯಲ್ಲಿ ಆಂಗ್ಲ ಶಿಕ್ಷಣಕ್ಕೆ ಕಳುಹಿಸಿ ಕೊಟ್ಟರು.ರಾಘವೇಂದ್ರನು ಆಂಗ್ಲ ಶಿಕ್ಷಣಕ್ಕೆ ತಿಲಾಂಜಲಿಯನ್ನಿತ್ತು ಮರಳಿ ದೇವರಹಿಪ್ಪರಗಿ ಗೆ ಬಂದನು. ರಾಘವೇಂದ್ರನಿಗೆ ಬಡ್ಡಿ ವ್ಯವಹಾರ,ನ್ಯಾಯ ನೀತಿ,ಸರಳತನ,ಧರ್ಮದ ತಿಳವಳಿಕೆ ನೀಡಿದ್ದರಿಂದ ರಾಘವೇಂದ್ರನು ರಾಘಣ್ಣ ನಾಯಕರಾಗಿ ಬೆಳೆದರು.ದೇವರ ಹಿಪ್ಪರಗಿಯ ಸಾರ್ವಜನಿಕ ಹಿತಾಸಕ್ತಿಗಳಲ್ಲಿ ಗಮನ ಕೊಡುವದರಿಂದ ತಾಲೂಕಾ ಲೊಕಲ್ ಬೋರ್ಡ ಮತ್ತು ಜಿಲ್ಲಾ ಬೋರ್ಡ,ಸಹಕಾರಿ ಸಂಘದ ಸದಸ್ಯರಾಗಿ ತಮ್ಮ ಸೇವೆಯನ್ನು ಸಲ್ಲಿಸಿದರು.ರಾಘಣ್ಣ ನಾಯಕರು ಸೀದಾ ಸಾದಾ ಆಗಿದ್ದರೆಂಬುದಕ್ಕೆ ಅವರ ವೇಷ ಭೂಷಣವೆ ಸಾಕ್ಷಿ. ಬಗಲ ಕಿಸೆ ಅಂಗಿ ,ಧೋತರ ಮತ್ತೆ ತಲೆಗೆ ರುಮಾಲು (ಮುಂಡಾಸ) ಅವರ ಡ್ರೆಸ್ .ರಾಘಣ್ಣ ನಾಯಾಕರ ಮದುವೆಯನ್ನು ಸೀತಾಬಾಯಿ ಜತೆಯಲ್ಲಿ ಮಾಡಿದರು ಭೀಮಾಜಿಯವರು ತಮ್ಮ ಜೀವಿತಾವಧಿಯಲ್ಲಿಯೆ ರಾಘಣ್ಣ ಅವರ ಮದುವೆ ಯನ್ನು ಅವರ ಹದಿನೈದನೇ ವಯಸ್ಸಿನಲ್ಲಿ ಮಾಡಿದ್ದರು. ಎರಡೆ ವರ್ಷದಲ್ಲಿ ಸೀತಾಬಾಯಿ ತೀರಿಕೊಂಡಳು.೧೮೭೬ ರಲ್ಲಿ ರಾಘಣ್ಣ ನಾಯಕರು ಎರಡನೆಯ ಮದುವೆಯು ತಡಸದ ಲಕ್ಷ್ಮೀಬಾಯಿ ಜತೆ ನೆರವೇರಿತು.ಇವರಿಗೆ ಕೃಷ್ಣಾಬಾಯಿ,ಭೀಮಣ್ಣ ನಾಯಕ,ಕೃಷ್ಣಣ್ಣ ನಾಯಕ ,ಭಾಗೀರಥಿ ಬಾಯಿ,ಹಣಮಂತರಾಯ,ಹಾಗು ಮಧ್ವ ರೆಂಬ ಆರು ಮಕ್ಕಳು. '===ವಿದ್ಯಾಭ್ಯಾಸ ===' ರಾಘಣ್ಣ ನಾಯಕರು ಮತ್ತು ಲಕ್ಶ್ಮೀಬಾಯಿ ದಂಪತಿಗಳಿಂದ ನಾಲ್ಕನೇಯ ಮಗನಾಗಿ ಹಣಮಂತರಾಯರು ಜನಿಸಿದರು.ಹಣಮಂತರಾಯರು ತಮ್ಮ ನಾಲ್ಕನೇಯ ವಯಸ್ಸಿನಲ್ಲಿ ತಮ್ಮ ತಾಯಿಯನ್ನು ಕಳೆದುಕೊಂಡರು.ತಂದೆ ರಾಘಣ್ಣ ಮತ್ತು ಅಜ್ಜಿ ರಾಧಾಬಾಯಿ ಮಲತಾಯಿ ಸಾವಿತ್ರಿ ಬಾಯಿ ಯವರ ವಾತ್ಸಲ್ಯ ಮತ್ತು ಪ್ರೀತಿ ಯಿಂದ ಬೆಳೆದರು.ದೇವರ ಹಿಪ್ಪರಗಿಯಲ್ಲಿ ಪ್ರಾಥಮಿಕ ಶಿಕ್ಷಣ ಅಂದರೆ ನಾಲ್ಕನೇಯ ಇಯತ್ತೆ ವರೆಗೆ ಓದಿದರು.ಬಾಗಲಕೋಟೆಯ ಎ ,ವ್ಹಿ ಹೈಸ್ಕೂಲಲ್ಲಿ ಐದನೇಯ ಇಯತ್ತೆ ಯನ್ನು ಆರನೇಯ ಇಯತ್ತೆಯನ್ನು ವಿಜಾಪುರದ ಸರಕಾರಿ ಶಾಲೆಯಲ್ಲಿ ಓದಿದರು.೧೯೧೨ ರಲ್ಲಿ ಬೆಳಗಾವಿ ಕೇಂದ್ರದಿಂದ ಅಂದಿನ ಸ್ಕೂಲ ಫೈನಲ್ ಪರೀಕ್ಷೆಯಲ್ಲಿ ತೇರ್ಗಡೆ ಯಾದರು.ವಿಜಾಪುರದ ಶಾಲೆಯಲ್ಲಿರುವಾಗ ಶಿಕ್ಷಕರಾಗಿದ್ದ ಜಿ ಕೆ ಪುರಾಣಿಕರು ಮತ್ತು ಶಿಷ್ಯ ಮೊಹರೆ ಹಣಮಂತರಾಯರು ಅನ್ಯೋನ್ಯ ವಾಗಿದ್ದರು.ಶಿಕ್ಷಕರಾದ ಜಿ ಕೆ ಪುರಾಣಿಕರಿಗೆ ಕಾರವಾರಕ್ಕೆ ವರ್ಗವಾದುದರಿಂದ ಗುರು ಶಿಷ್ಯರಿಗೆ ಆಕಾಶವೆ ಕಳಚಿ ಬಿದ್ದಂತಾಯ್ತು.ಹಣಮಂತರಾಯರು ಶಿಕ್ಷಕರಾದ ಜಿ ಕೆ ಪುರಾಣಿಕರವರಲ್ಲಿ ಚರ್ಚಿಸಿ ಮುಂದಿನ ಶಿಕ್ಷಣವನ್ನು ಕಾರವಾರದಲ್ಲಿಯೆ ಮುಂದುವರೆಸುವದಾಗಿ ತೀರ್ಮಾನಿಸಿದರು. ಆಗ ಭಾರತದಲ್ಲಿ ಬ್ರಿಟೀಷರ ಆಳ್ವಿಕೆ ಇತ್ತು, ಸಾರಿಗೆ ಸಂಪರ್ಕ ಅಷ್ಟೊಂದು ಗಮನಾರ್ಹವಾಗಿ ಬೆಳೆದಿರಲಿಲ್ಲ.ಹಣಮಂತರಾಯರು ವಿಜಾಪುರದಿಂದ ರೈಲಿನಲ್ಲಿ ಹುಬ್ಬಳ್ಳ್ಳಿಗೆ ಪ್ರಯಾಣಿಸಿದರು.ಹುಬ್ಬಳ್ಳಿಯಿಂದ ಕಾರವಾರಕ್ಕೆ ಎತ್ತಿನಗಾಡಿ (ಚಕ್ಕಡಿ )ಯಲ್ಲಿ ಹದಿನೈದು ದಿವಸ ಪ್ರಯಾಣ ಮಾಡಿ ಕಾರವಾರ ತಲುಪಿದರು.೧೯೧೩ ರಲ್ಲಿ ಒಂದು ವರ್ಷ ಅಭ್ಯಾಸ ಮಾಡಿ ಮೆಟ್ರಿಕ್ಯುಲೇಶನ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಆಗ ಉತ್ತರ ಕರ್ನಾಟಕವು ಮುಂಬೈ ಪ್ರಾಂತ್ಯ್ದ ದ ಭಾಗವಾಗಿದ್ದುದರಿಂದ ಸಹಜವಾಗಿ ಕಾಲೇಜುಗಳು ಪುಣೆ ನಗರದಲ್ಲಿ ಇದ್ದವು. ಪುಣೆ ನಗರದಲ್ಲಿ ಡೆಕ್ಕನ್ ಕಾಲೇಜು , ಫರ್ಗ್ಯುಸನ್ ಕಾಲೇಜು ಹೆಸರು ವಾಸಿಯಾಗಿದ್ದವು.ಪುಣೆ ನಗರವು ಗೋಪಾಲಕೃಷ್ಣ ಗೋಖಲೆ , ಬಾಲಗಂಗಾಧರ ತಿಲಕರ ಪ್ರಭಾವಕ್ಕೊಳಪಟ್ಟಿದ್ದರಿಂದ ಕ್ರಾಂತಿಕಾರರು,ಸ್ವಾತಂತ್ರ್ಯ ಹೋರಾಟಗಾರರನ್ನು ತರಬೇತುಗೊಳಿಸುವ ತಾಣವಾಗಿತ್ತು ಎಂದರೆ ತಪ್ಪಾಗಲಾರದು.ಬಾಲಗಂಗಾಧರ ತಿಲಕರ ಕೇಸರಿ ಮರಾಠಿ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಅಗ್ರ ಲೇಖನಗಳು ಮತ್ತು ಉಗ್ರ ಲೇಖನಗಳು ಯುವಕರನ್ನು ಸ್ವಾತಂತ್ರ್ಯ ಚಳುವಳಿಗೆ ಪ್ರೇರೇಪಿಸುತ್ತಿದ್ದವು. ಅಂಥ ಸಂದರ್ಭದಲ್ಲಿ ಮೊಹರೆ ಹಣಮಂತರಾಯರು ಪುಣೆಯ ಡೆಕ್ಕನ್ ಕಾಲೇಜಿಗೆ ಪ್ರವೇಶ ಪಡೆದರು.ಇವರ ಜತೆಯಲ್ಲಿಯೆ ಬಾಗಲಕೋಟೆಯ ತಮ್ಮಣ್ಣಾಚಾರ್ಯ ಪುರೋಹಿತರು ಕೂಡ ಅದೆ ಕಾಲೇಜಿಗೆ ಸೇರಿಕೊಂಡರು. ೧೯೧೪-೧೯೧೮ ಪ್ರಥಮ ಮಹಾಯುಧ್ಧದ ಕಾಲ,ದೇಶ ಸೇವೆಗೆ ತಮ್ಮ ಸೇವೆ ಮುಡುಪಾಗಿಡಲು ರಾಷ್ಟ್ರೀಯ ನಾಯಕರು ಪುಣೆ ನಗರದಲ್ಲಿ ತಮ್ಮ ಕ್ರಾಂತಿಕಾರಿ ಭಾಷಣಗಳನ್ನು ನೀಡಿ ಯುವಕರನ್ನು ಬಡಿದೆಬ್ಬಿಸುವ ಪ್ರಮುಖರಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕ ,ಮದನ ಮೊಹನ ಮಾಲವೀಯ , ಗೋಪಾಲಕೃಷ್ಣ ಗೋಖಲೆ ,ಬಿಪಿನ ಚಂದ್ರ ಪಾಲ , ಮತ್ತಿತರರು.ಕಾಲೇಜು ವಿದ್ಯಾರ್ಥಿಗಳು ಕಾಲೇಜಿನಿಂದ ಒಪ್ಪಿಗೆ ಪತ್ರ ಪಡೆದು ಭಾಷಣಗಳಲ್ಲಿ ಭಾಗವಹಿಸುತ್ತಿರುವದು ಸಹಜವಾಗಿತ್ತು.ಭಾಷಣಗಳು ,ಪತ್ರಿಕೆಗಳಲ್ಲಿ ಪ್ರಕಟವಾಗುವ ಲೇಖನ ಗಳಿಗೆ ಮಾರು ಹೋಗುವದು ಸರ್ವೆ ಸಾಮಾನ್ಯವಾದ ಕಾಲವದು. ಮೊಹರೆ ಹಣಮಂತರಾಯರು ಇದಕ್ಕೆ ಹೊರತಾಗಿರಲಿಲ್ಲ ವೆಂದರೆ ಅತಿಶಯ ಯೋಕ್ತಿಯಾಗಲಾರದು.ಮೊಹರೆ ಹಣಮಂತರಾಯರು ೧೯೧೮ ರಲ್ಲಿ ಗಣೀತ ವಿಷಯವನ್ನು ಪ್ರಮುಖವಾಗಿ ತೆಗೆದುಕೊಂಡು ಆರ್ಟ್ಸನಲ್ಲಿ ತೇರ್ಗಡೆಯಾದನಂತರ ಮುಂಬೈ ಎಲ್ಫಿನಸ್ಟನ ಕಾಲೇಜು ಸೇರಿ ಜ್ಯುನೀಯರ ಮತ್ತು ಸೀನಿಯರ ಬಿ ಎ ಕ್ಲಾಸುಗಳನ್ನು ಮುಗಿಸಿದರು.೧೯೨೧ರಲ್ಲಿ ಬಿ ಎ ಪರೀಕ್ಷೆಗೆ ಆವೇದನ ಪತ್ರವನ್ನು ಸಲ್ಲಿಸಿದರು. ೧೯೨೦ರಲ್ಲಿ ಬಾಲಗಂಗಾಧರ ತಿಲಕರ ನಿಧನಾನಂತರ ಭಾರತದ ಸ್ವಾತಂತ್ರ್ಯ ಹೋರಾಟದ ದಿಕ್ಕನ್ನೆ ಬದಲಿಸಿತು ಎನ್ನುವದು ಗಮನಾರ್ಹ ಅಂಶ.ಸ್ವಾತಂತ್ರ್ಯ ಹೋರಾಟದ ಮುಂದಾಳತ್ವವನ್ನು ಮಹಾತ್ಮಾ ಗಾಂಧೀಜಿಯವರು ವಹಿಸಿಕೊಂಡರು.೧೯೧೮ ರಲ್ಲಿ ಪಂಜಾಬದಲ್ಲಿ ನಡೆದ ಅತ್ಯಾಚಾರ ಘಟನೆಗೆ ಸಂಭಂದಿಸಿದಂತೆ ಮಹಾತ್ಮಾ ಗಾಂಧೀಜಿಯವರು ಅಸಹಕಾರ ಆಂದೋಲನಕ್ಕೆ ಕರೆ ಕೊಟ್ಟರು.ವಿದ್ಯಾರ್ಥಿಗಳು ಶಾಲೆ ಕಾಲೇಜು ಬಿಟ್ಟು ಹೊರಬರಬೇಕೆಂದು ಮಹಾತ್ಮಾ ಗಾಂಧೀಜಿಯವರು ಕರೆ ಇತ್ತರು. ಸ್ವಾರ್ಥ ತ್ಯಾಗ ದೇಶಪ್ರೇಮ ಮೊಹರೆಯವರನ್ನು ಬಡಿದೆಬ್ಬಿಸಿತು. ಆ ಕರೆಗೆ ಓಗೊಟ್ಟು ಮೊಹರೆ ಹಣಮಂತರಾಯರು ಬಿ ಎ ಪರೀಕ್ಷೆಯನ್ನು ತಗೆದುಕೊಳ್ಳದೆ ಅಸಹಕಾರ ಚಳುವಳಿಗೆ ಧುಮುಕಿದರು.೧೯೨೧ ರಲ್ಲಿ ಬಿ ಎ ಪರೀಕ್ಷೆ ಯನ್ನು ಬರೆಯದೆ ಮುಂಬೈ ಯಿಂದ ಹಣಮಂತರಾಯರು ವಿಜಾಪುರಕ್ಕೆ ಮರಳಿ ಬಂದರು. ಹಣಮಂತರಾಯರು ವಕೀಲರಾಗಬೇಕೆಂಬ ಹಂಬಲ ರಾಘಣ್ಣ ನಾಯಕರಿಗಿತ್ತು.ಖಾದಿ ಬಟ್ಟೆ ತೊಟ್ಟು ಸ್ವಾತಂತ್ರ್ಯ ಚಳುವಳಿಗೆ ಧುಮುಕಿದ ಹಣಮಂತರಾಯರು ಧೀರೋದಾತ್ತ ಜೀವಿಗಳು. ಪತ್ರಿಕೆಗಳ ಮಹತ್ವವನ್ನು ಅರಿತ ಹಣಮಂತರಾಯರು ಭಾರತೀಯ ಕಾಂಗ್ರೆಸ ಬೆಳವಣಿಗೆ ಹಾಗು ಸ್ವಾತಂತ್ರ್ಯ ಚಳುವಳಿಗೆ ಪ್ರೇರಕವಾದ ಪತ್ರಿಕಾರಂಗಕ್ಕೆ ಪಾದಾರ್ಪಣೆ ಮಾಡಿದರು. ವಿಜಾಪುರದಲ್ಲಿ ಕೌಜಲಗಿ ಶ್ರೀನಿವಾಸರಾವ,ಜಯರಾವ ದೇಶಪಾಂಡೆ, ಕೌಜಲಗಿ ಹಣಮಂತರಾವ, ತಿಳಗೂಳ ರಂಗರಾವ, ಮತ್ತಿತರರು ಮಹಾತ್ಮಾ ಗಾಂಧೀಜಿಯವರ ಅಸಹಕಾರ ಆಂದೋಳನ ಕರೆಗೆ ಓಗೊಟ್ಟು ವಕೀಲಿ ವೃತ್ತಿಗೆ ತಿಲಾಂಜಲಿಯನ್ನಿತ್ತು ದೇಶಸೇವೆಗೆ ತಮ್ಮನ್ನು ತಾವು ತೊಡಗಿಸಿಕೊಡ ಮಹನೀಯರ ಜೆತೆ ಒಡಗೂಡಿದರು ಮೊಹರೆ ಹಣಮಂತರಾಯರು.ಸುಮಾರು ಒಂದೂವರೆ ವರ್ಷಕಾಲ ವಿಜಾಪುರದ ರಾಷ್ಟ್ರೀಯ ಶಾಲೆಯೊಂದರಲ್ಲಿ ಇತಿಹಾಸವನ್ನು ಭೋಧಿಸುತ್ತಿದ್ದರು.ಇದರ ಜತೆಗೆ ಕರ್ನಾಟಕ ಕಾಂಗ್ರೆಸ ಸಮೀತಿಯ ಸದಸ್ಯರಾಗಿ ಕಾಂಗ್ರೆಸ ಬೆಳವಣಿಗೆಗೆ ಪ್ರೇರಣೆಯಾದರು. ===ಪತ್ರಿಕೆಗಳ ಹಿನ್ನೆಲೆ ಮತ್ತು ಕರ್ನಾಟಕ ವೈಭವ === ಪತ್ರಿಕಾ ಪ್ರಪಂಚದ ಹಿನ್ನೆಲೆಯನ್ನು ಹಿಂತಿರುಗಿ ನೋಡಿದಾಗ ಜೇಮ್ಸ ಅಗಸ್ಟ ಸ್ ಹಿಕ್ಕಿ ಪ್ರಕಟಿಸಿದ ಕಲಕತ್ತಾ ಜನರಲ್ ಅಡ್ವರ್ಟೈಸರ್ ಅಥವಾ ಬೆಂಗಾಲ ಗೆಜೆಟ್ ೧೭೮೦ ರಲ್ಲಿ ಪ್ರಾರಂಭವಾದ ಪ್ರಪ್ರಥಮ ಹೆಗ್ಗಳಿಕೆ ಗೆ ಪಾತ್ರವಾದ ಪತ್ರಿಕೆ.೧೮೪೩ ರಲ್ಲಿ "ಮಂಗಳೂರು ಸಮಾಚಾರ " ಜರ್ಮನಿಯ ಧರ್ಮಪ್ರಚಾರಕ ಹರ್ಮನ್ ಮೊಗ್ಲಿಂಗ ಅವರಿಂದ ಪ್ರಾರಂಭವಾಯಿತು.೧೮೫೬ ರಲ್ಲಿ ಬೆಳಗಾವಿಯ " ಕರ್ನಾಟಕ ಮಿತ್ರ" ಮತ್ತು ಬಳ್ಳಾರಿಯ "ಕನ್ನಡ ವಾರ್ತಿಕ "೧೮೭೩ ರಲ್ಲಿ ಧಾರವಾಡದ "ಧಾರವಾಡ ವೃತ್ತ "೧೮೮೨-೧೮೮೩ ರಲ್ಲಿ ಮೈಸೂರಿನ "ಕರ್ನಾಟಕ ಪ್ರಕಾಶಿಕಾ" ಹಾಗು "ಕನ್ನಡ ಸುವಾರ್ತೆ" ೧೮೮೮ ರಲ್ಲಿ " ಸೂರ್ಯೋದಯ ಪ್ರಕಾಶಿಕ "೧೮೯೨ ರಲ್ಲಿ ಶ್ರೀ ಅಣ್ಣಾಜಿ ಗೋಪಾಳ ಜೋರಾಪುರ ಮತ್ತು ಗುಂಡೆರಾವ ರಾಮಚಂದ್ರರಾವ ಮಣ್ಣೂರಕರ ಇವರ ನೇತ್ರತ್ವದಲ್ಲಿ ವಿಜಾಪುರದ "ಕರ್ನಾಟಕ ವೈಭವ "ವಾರಪತ್ರಿಕೆ ಪ್ರಾರಂಭವಾಯಿತು. ಶ್ರೀ ಗುಂಡೆರಾವ ಅವರ ಸಂಪಾದಕತ್ವ ಹಾಗೂ ಶ್ರ್ರೀ ಅಣ್ಣಾಜಿ ಯವರು ವ್ಯವಸ್ಥಾಪಕರಾಗಿ ಕೆಲಸ್ ನಿರ್ವಹಿಸುತ್ತಿದ್ದರು. ಆಗಿನ ಲೇಖಕರಾದ ಕೆರೂರ ವಾಸುದೇವಾಚಾರ್ಯರು ,ಶ್ರೀ ಆಲೂರ ವೆಂಕಟರಾಯರು ,ನಾ ಶ್ರೀ ರಾಜಪುರೊಹಿತರು, ಶ್ರೀ ಜಿ ಆರ್ ಕುಲಕರ್ಣಿ ಮುಂತಾದವರು ಕರ್ನಾಟಕ ವೈಭವಕ್ಕೆ ಬರೆಯುತ್ತಿದ್ದರು. ಇತಿಹಾಸ ತಜ್ಞ ಮತ್ತು ಪತ್ರಿಕಾಕರ್ತ ಇಗ್ನೆಶಿಯಸ್ ವೆಲಂಟೈನೆ ಚಿರೊಲ ೧೯೦೭ ರಲ್ಲಿ ಸಂಪಾದಿಸಿದ "ಇಂಡಿಯ ಅನ್ ರೆಸ್ಟ " ಎಂಬ ಗ್ರಂಥದಲ್ಲಿ ಕರ್ನಾಟಕದ ಒಂದು ಉಗ್ರ ಕ್ರಾಂತಿಕಾರಿ ಪತ್ರಿಕೆ ಕರ್ನಾಟಕ ವೈಭವ ಎಂದು ಬಣ್ಣಿಸಿದ್ದಾರೆ. ಕರ್ನಾಟಕ ವೈಭವದಲ್ಲಿ ಮೊಹರೆ ಹಣಮಂತರಾಯರು ಮತ್ತು ರೊದ್ದ ವ್ಯಾಸರಾಯರು ಬರೆದ ನಾಲ್ಕು ಲೇಖನಗಳಿಗಾಗಿ ನಾಲ್ವತ್ತು ಸಾವಿರ ರೂಪಾಯಿಗಳ ಜಾಮೀನು ಕೊಟ್ಟು ಮುದ್ರಣಾಲಯ ಮತ್ತು ಪತ್ರಿಕೆಯನ್ನು ಮಾರಾಟ ಮಾಡುವ ಪ್ರಸಂಗ ಒದಗಿ ಬಂತು.ದೇಶಪಾಂಡೆ ಜಯರಾಯರು ,ಮುದ್ದೇಬಿಹಾಳದ ದೊಡ್ಡಿಹಾಳ ಭಾವುರಾಯರು ಕೌಜಲಗಿ ತಿರುಮಲರಾಯರು ಮತ್ತು ಮೊಹರೆ ಹಣಮಂತರಾಯರು ಸೇರಿಕೊಂಡು ಕರ್ನಾಟಕ ವೈಭವ ಮುದ್ರಣಾಲಯವನ್ನು ಕೊಂಡುಕೊಂಡರು.ಸಂಪಾದಕ ದೇಶಪಾಂಡೆ ಜಯರಾಯರ ನಿಧನಾನಂತರ ರಂಗರಾವ ತಿಳಗೂಳರು ಸಂಪಾದಕತ್ವವನ್ನು ವಹಿಸಿಕೊಂಡರು. ಮೊಹರೆ ಹಣಮಂತರಾಯರು ವಿದ್ಯಾರ್ಥಿದೆಸೆಯಲ್ಲಿ ಇರುವಾಗಲೆ ಅಂದರೆ ೧೯೧೫-೧೬ ರಲ್ಲಿ ಕರ್ನಾಟಕ ವೈಭವದಲ್ಲಿ ಇಂಗ್ಲೀಷನಲ್ಲಿ ಲೇಖನಗಳನ್ನು ಬರೆದಿದ್ದರು. ೧೯೨೨ ರಲ್ಲಿ ಧಾರವಾಡದ ಗೋಲಿಬಾರ ಕುರಿತಂತೆ "ಧಾರಾತೀರ್ಥವಾದ ಧಾರವಾಡ "ಎಂಬ ಲೇಖನವನ್ನು ಶ್ರೀ ಮುದವೀಡು ಕೃಷ್ಣರಾಯರು ಕರ್ನಾಟಕ ವೈಭವದಲ್ಲಿ ಬರೆದಿದ್ದರು.ಅದನ್ನು ಉಪಯೋಗಿಸಿಕೊಂಡು ಮೊಹರೆ ಹಣಮಂತರಾಯರು ಕರ್ನಾಟಕ ವೈಭವದಲ್ಲಿ ಅಗ್ರ ಲೇಖನವನ್ನು ಬರೆದರು.ಅದಕ್ಕೆ ಸಂಪಾದಕ ತಿಳಗೂಳ ರಂಗರಾಯರನ್ನು ಬಂಧಿಸಿ ಶಿಕ್ಷೆ ವಿಧಿಸಲಾಯ್ತು.ತದ ನಂತರ ಮೊಹರೆ ಹಣಮಂತರಾಯರು ಕರ್ನಾಟಕ ವೈಭ ಸಂಪಾದಕತ್ವವನ್ನು ವಹಿಸಿಕೊಂಡರು. ಆಗಿನ ಕಾಲದಲ್ಲಿ ಹೆಂಡರ್ಸನ್ ಎಂಬ ಬ್ರಿಟೀಷ ಅಧಿಕಾರಿ ವಿಜಾಪುರ ಜಿಲ್ಲಾ ಕಲೆಕ್ಟರ ಮತ್ತು ಜಿಲ್ಲ ನ್ಯಾಧೀಶರು ಆಗಿದ್ದರು.ಅವರು ಕುರುಡರಿಗೆ ಆಸ್ಪತ್ರೆ ಯನ್ನು ಕಟ್ಟಿಸಲು ಹಣ ಸಂಗ್ರಹಿಸತೊಡಗಿದ್ದರು.ಸಾರ್ಥಕವಾದ ಉದ್ದೇಶವಿದ್ದರೂ ಹಣ ಸಂಗ್ರಹ ಮಾಡುವ ವಿಧಾನ ಆಕ್ಷೇಪಾರ್ಹ ವಾಗಿತ್ತು.ಇವರ ನಿಲುವನ್ನು ಬಯಲಿಗೆಳೆಯಲು ಮೊಹರೆ ಹಣಮಂತರಾಯರು ಕಠೋರವಾದ ಲೆಖನಗಳನ್ನು ಬರೆದು ಹೆಂಡರ್ಸನ್ ರ ಕೆಂಗಣ್ಣಿಗೆ ಗುರಿಯಾಗಿದ್ದರು. "ಕರ್ನಾಟಕ ವೀರರೆ " ಲೇಖನವನ್ನು ಮೊಹರೆ ಹಣಮಂತರಾಯರು ಬರೆದಿದ್ದರು. ಆ ಲೆಖನ ಕಾಲೇಜು ವಿದ್ಯಾರ್ಥಿಗಳನ್ನು ಮತ್ತು ಯುವಕರನ್ನು ಬಡಿದೆಬ್ಬಿಸಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹತ್ತಿಸುವಲ್ಲಿ ಮತ್ತು ದೇಶ್ಪ್ರೇಮವನ್ನು ಸಾರುವಲ್ಲಿ ಅಗ್ರ ಲೇಖನ ಯಶಸ್ವಿ ಯಾಗಿತ್ತು.ಹೆಂಡರ್ಸನ್ ರವರು ರಾಜದ್ರೋಹದ ಲೇಖನವೆಂದು ಪರಿಗಣಿಸಿ ಇಂಡಿಯನ್ ಪೀನಲ್ ಕೋಡ ೧೨೪(ಅ) ಪ್ರಕಾರ ಖಟ್ಲೆ ಹಾಕಿದರು."ಕರ್ನಾಟಕ ವೀರರೆ"ಎಂಬುದನ್ನು ಸರಕಾರಿ ವಕೀಲರಾದ ಶ್ರೀ ಹಳಕಟ್ಟಿಯವರು " " ಎಂದು ಭಾಷಾಂತರಿಸಿದ್ದರು.ಈ ಭಾಷಾಂತರ ತಪ್ಪು ಭಾಷಾಂತರ ವಾಗಿರಬೇಕೆಂಬ ನಿಲುವು ಮೊಹರೆ ಹಣಮಂತರಾಯರವರ್ದಾಗಿತ್ತು ಆದರೆ ಅಸಹಕಾರಿಗಳು ಬ್ರಿಟೀಷ ಸರಕಾರದ ನ್ಯಾಯಾಲಯಗಳಲ್ಲಿ ವಕೀಲರನ್ನು ಕೊಟ್ಟು ಖಟ್ಲೆ ನಡೆಸುವಂತಿರಲಿಲ್ಲ.ಅಸಹಕಾರ ಸತ್ಯಾಗ್ರಹಿಗಳು ಬ್ರಿಟೀಷರು ನಡೆಸುವ ನ್ಯಾಯ ವಿಚಾರಣೆಯಲ್ಲಿ ಭಾಗವಹಿಸದೆ ಶಿಕ್ಷೆಯನ್ನು ನಗುಮೊಗದಿಂದಲೆ ಸ್ವಾಗತಿಸಬೇಕೆನ್ನುವದು ಮಹಾತ್ಮಾ ಗಾಂಧೀಜಿಯವರ ಕಟ್ಟಪ್ಪಣೆಯಾಗಿತ್ತು.ಮಹಾತ್ಮಾ ಗಾಂಧೀಜಿಯವರ್ ಕಟ್ಟಾ ಅನುಯಾಯಿಯಾಗಿದ್ದ ಮೊಹರೆ ಹಣಮಂತರಾಯರು ಗಾಂಧೀಜಿಯವರ ಸಂದೇಶವನ್ನು ಆದೇಶವೆಂದೆ ಚಾಚು ತಪ್ಪದೆ ಪಾಲಿಸುತ್ತಿರುವ ಧೀಮಂತ ವ್ಯಕ್ತಿಯಾಗಿದ್ದರು.ಅವರು ಹೆಂಡರ್ಸನ್ ಮ್ಯಾಜಿಸ್ಟ್ರೇಟ ಕೋರ್ಟಿಗೆ ಸಲ್ಲಿಸಿದ ಕೈಫಿಯತ್ತು ಐತಿಹಾಸಿಕವಾಗಿದ್ದು ಅದರ ಸಂಪೂರ್ಣ ಪಾಠ ಕೆಳಗಿನಂತಿದೆ. ೧. ನನ್ನ ಮೇಲೆ ಖಟ್ಲೆ ಆದ ಲೇಖನವನ್ನು ನಾನೆ ಬರೆದು ಕರ್ನಾಟಕ ವೈಭವದಲ್ಲಿ ಮುದ್ರಿಸಿ ಪ್ರಕಟಿಸಿರುತ್ತೇನೆ.ಈ ವರ್ತಮಾನ ಪತ್ರಿಕೆಯ ಸಂ<ಪಾದಕನೂ ನಾನೇ ಇದ್ದೆ. ಆದ್ದರಿಂದ ಈ ಲೇಖನದ ಬಗ್ಗೆ ಪೂರ್ಣ ಹೊಣೆಗಾರಿಕೆ ನನ್ನದು. ೨. ಪ್ರಚಲಿತ ರಾಜ್ಯ ಪದ್ಧತಿ ನಿರ್ಜೀವವೂ ಬಾದರಾಯಣವೂ ಇರುವದರಿಂದ ಈಗಿನ ೨೦ ನೇ ಶತಮಾನದಲ್ಲಿ ನಮ್ಮ ಆಶೋತ್ತರ ಪೂರೈಸಲು ಯೋಗ್ಯವಾಗಿರುವದಿಲ್ಲ .ಆದುದರಿಂದ ಇಂಥ ರಾಜ್ಯ ಪದ್ಧತಿಯೊಡನೆ ಅಸಹಕಾರ ಮಾಡಿ , ಜನತೆಗೂ ಆ ರೀತಿ ಮಾಡುವಂತೆ ಹೇಳುವದು ನನ್ನ ಕರ್ತವ್ಯವೆಂದು ತಿಲಿದಿದ್ದೇನೆ. ಹೀಗೆ ಮಾಡುವಾಗ ಪ್ರಚಲಿತ ರಾಜ್ಯ ಪದ್ಧತಿ ಸುಧಾರಿಸಬೇಕೆಂಬ ಉದ್ದೇಶದಿಂದ ಅದರ ಮೇಲೆ ನನ್ನ ಟೀಕಾಸ್ತ್ರ ಹೂಡುವದು ನನ್ನ ಕರ್ತವ್ಯವೆಂದು ಭಾವಿಸಿದ್ದೇನೆ.ಪ್ರಸ್ತುತ ಲೇಖನದಲ್ಲಿ ಕರ್ನಾಟಕದ ತರುಣರಿಗೆ ರಾಷ್ಟ್ರ ಸೇವಕರಾಗಲಿಕ್ಕೆ ಹೇಳುವಾಗ ಈಗಿನ ಸರಕಾರದ ನಿಜ ಸ್ವರೂಪವನ್ನು ಬಯಲಿಗೆಳೆದುದಕ್ಕೆ ನನಗೆ ಅಭಿಮಾನವೆನಿಸುತ್ತದೆ. ೩. ನನ್ನ ತಿಳುವಳಿಕೆಯ ಪ್ರಕಾರ ಈ ಆಕ್ಷೇಪಿಸಲ್ಪಟ್ಟಿರುವ ಲೇಖನವು ಇಂಡಿಯನ್ ಪೀನಲ್ ಕೋಡ ೧೨೪ (ಅ) ಕಲಮಿನ ಪ್ರಕಾರ ರಾಜೋದ್ರಹಾತ್ಮಕವಾಗಲಾರದು. ಬೇರೆ ಬೇಎ ಹೈಕೋರ್ಟುಗಳ ನಿರ್ಣಯಗಳೂ ಈ ನನ್ನ ತಿಳುವಳಿಕೆಯನ್ನು ಧೃಡೀಕರಿಸುತ್ತವೆ. ಆದರೂ ಈ ೧೨೪ (ಅ) ಕಲಮನ್ನು ನೌಕರಶಾಹಿಯವರು ಅನೇಕ ಸಲ ತಮಗೆ ಅನುಕೂಲವಾಗುವಂತೆ ಜಗ್ಗಿ ಜಗ್ಗಿ ಅರ್ಥ ಮಾದಿ, ದುರುಪಯೋಗ ಮಾಡಿಕೊಂಡ ಉದಾಹರಣೆಗಳು ನನ್ನ ಕಣ್ಮುಂದೆ ಇರುವದರಿಂದ ನನ್ನ ಈ ಲೇಖನವು ರಾಜದ್ರೋಹಾತ್ಮಕ ಆಗದೆ ಇರುವದಿಲ್ಲವೆಂದು ಹೇಳುವ ನಿರರ್ಥಕ ಗೋಜಿಗೆ ಹೋಗುವದಿಲ್ಲ. ೪. ಖಟ್ಲೆಯಲ್ಲಿಯೂ ಸರಕಾರದ ಪರವಾಗಿ ನನ್ನ ಲೇಖನದ ತಪ್ಪು ಭಾಷಾಂತರ ಹಾಜರ ಮಾಡಿರುವದಲ್ಲದೆ, ನನ್ನ ಹಿಂದಿನ ಸಂಪಾದಕರಿಗಾದ ಎಚ್ಚರಿಕೆ ಜಾಮೀನು ಮತ್ತು ಶಿಕ್ಷೆಯೂ ನಿರ್ಣಯಗಳನ್ನು ಮಂಡಿಸಿದ್ದಾರೆ. ನನ್ನ ಮೇಲಿರುವ ಖಟ್ಲೆಯಲ್ಲಿ ಇವುಗಳ ಯಾವ ಸಂಬಂಧವೂ ಇರುವದಿಲ್ಲ. ೫. ನನ್ನ ಮಾತೃಭೂಮಿಯ ಉದ್ಧಾರ ಅಹಿಂಸಾತ್ಮಕ ಅಸಹಯೋಗದಿಂದಲೂ ನೌಕರಶಾಹಿಯಿಂದ ನಮಗಾಗುವ ಆತ್ಮಕ್ಲೇಶದ ಯೋಗದಿಂದಲೂ ಆಗುವದೆಂದು ನನಗೆ ಪೂರ್ಣ ವಿಶ್ವಾಸವಿರುವದರಿಂದ ನನಗೆ ಈ ನ್ಯಾಯಾಲಯದಿಂದಾಗುವ ಶಿಕ್ಷೆಯನ್ನು ಅನುಭವಿಸಲಿಕ್ಕೆ ಸಿದ್ಧನಿದ್ದೇನೆ.ಈ ನ್ಯಾಯಾಲಯದ ನಿರ್ಣಯ ಏನೇ ಆಗಲಿ ನನ್ನ ಮಾತೃಭೂಮಿಯ ಸಲುವಾಗಿ ಬೇಕಾದಂಥ ಕ್ಲೇಶಗಳನ್ನು ಸಹಿಸುವ ಸಾಮರ್ಥ್ಯವನ್ನು ಪರಮಾತ್ಮನು ನನಗೆ ಕರುಣಿಸಲೆಂದು ಪ್ರಾರ್ಥಿಸುತ್ತೇನೆ.ಈ ನ್ಯಾಯಧೀಶರ ವಿಷಯದಲ್ಲಿ ಪ್ರೇಮ ಭಾವನೆಯ ಹ್ರತು ಇನ್ನಾವುದೂ ಇರುವದಿಲ್ಲ. ಈ ಕೈಫಿಯತ್ತು ಮೊಹರೆ ಹಣಮಂತರಾಯರ ರಾಷ್ಟಪ್ರೇಮ ಮತ್ತು ಪತ್ರಿಕಾಧರ್ಮದ ಅವರ ವಿಶಿಷ್ಟ ತೆಯನ್ನು ಎತ್ತಿ ತೋರಿಸುತ್ತದೆ. === ಸ್ವರಾಜ್ಯ ಆಶ್ರಮ ಅಥವಾ ಸೆರೆಮನೆ === ಭೀಮಕಾಯದ ಮೊಹರೆ ಹಣಮಂತರಾಯರನ್ನು ವಿಚಾರ ಮಾಡಲು ವಿಜಾಪುರ ಡಿಸ್ಟ್ರಿಕ್ಟ ಜೈಲಿನಿಂದ ಕಲೆಕ್ಟರ ಸಾಹೇಬರ ಕಚೇರಿಯವರೆಗೆ ಸುಮಾರು ಎರಡು ಮೈಲು ಉರಿ ಬಿಸಿಲಿನಲ್ಲಿ ಕೈಗೆ ಕೊಳ ತೊಡಿಸಿ ಸೊಂಟಕ್ಕೆ ಹಗ್ಗ ಕಟ್ಟಿ ನಡೆಸುತ್ತ ಮೆರವಣಿಗೆಯಲ್ಲಿ ಪೊಲೀಸರು ಕರೆದುಕೊಂಡು ಬಂದಿದ್ದರು.ನೋಡುಗರ ಹಾಗೂ ಕುಟುಂಬದವರ ಕಣ್ಣಿಗೆ ಕ್ರೂರವಾದ ದೃಶ್ಯವಾಗಿ ಕಾಣುತ್ತಿತ್ತು, ಆದರೆ ಮೊಹರೆಯವರ ಹಣಮಂತರಾಯರ ಮುಖ ಮಾತ್ರ ನಗುಮೊಗವಾಗಿತ್ತು.ಮೊಹರೆಯವರ ವಿಚಾರಣೆ ಮುಗಿದು ಎರಡು ವರ್ಷ ದ ಶಿಕ್ಷೆ ಪ್ರಕಟಿಸಿದ ನಂತರ ಅವರ ಮಿತ್ರರು,ಕಾಂಗ್ರೆಸ ಕಮೀಟಿಯವರು ,ಮತ್ತು ಸಾರ್ವಜನಿಕರು ಸರದಿಯಾಗಿ ನಿಂತು ಮಾಲಾರ್ಪಣೆ ಮಾಡಿದರು.ತದನಂತರ ಪೊಲೀಸರು ಮೊಹರೆ ಹಣಮಾಂತರಾಯರನ್ನು ಟಾಂಗಾದಲ್ಲಿ ಕೂಡಿಸಿಕೊಂಡು ಸ್ವರಾಜ್ಯ ಆಶ್ರಮಕ್ಕೆ ಕರೆದುಕೊಂಡು ಹೋದರು. ಮೊಹರೆ ಹಣಮಂತರಾಯರು ಸೆರೆಮನೆಗೆ "ಸ್ವರಾಜ್ಯ ಆಶ್ರಮ " ಎಂದು ಕರೆಯುತ್ತಿದ್ದರು. ವಿಜಾಪುರದ ಜನತೆ ಮೊಹರೆ ಹಣಮಂತರಾಯರ ದೇಶಪ್ರೇಮ ,ಸ್ವಾರ್ಥತ್ಯಾಗ ,ಆತ್ಮವಿಶ್ವಾಸ ,ಹಸನ್ಮುಖಿ ,ಧೈರ್ಯ, ಕಂಡು ಅವರನ್ನು ಕೊಂಡಾಡಿತು. ಹಣಮಂರಾಯರ ತಂದೆ ರಾಘಣ್ಣ ನಾಯಕರು ಮತ್ತು ಕುಟುಂಬ ವರ್ಗದವರೆಲ್ಲರು ಮಗನ ದೇಶಪ್ರೇಮಕ್ಕೆ ಮನಸೋತು ಅವರ ಹೃದಯ ತುಂಬಿ ಬಂತು ಆದರೂ ಧೃತಿಗೆಡಲಿಲ್ಲ. ಮೊಹರೆಯವರ "ಕರ್ನಾಟಕ ವೀರರೆ " ಲೇಖನ ಉಡುಪಿಯ ಸಾದ್ವಿ ಮತ್ತು ಸತ್ಯಾಗ್ರಹಿಯಲ್ಲಿ ಮರು ಮುದ್ರಣವಾದ ಕಾರಣ ಆ ಪತ್ರಿಕೆಗಳ ಸಂಪಾದಕರಾದ ಶ್ರೀ ಎಚ್ ನಾರಾಯಣರಾವ ಹಾಗು ಶ್ರೀ ರಾಮರಾವ ಮಲ್ಯ ರವರಿಗೂ ಒಂದು ವರ್ಷ ಶಿಕ್ಷೆಯಾಯಿತು.ಅಂದರೆ "ಕರ್ನಾಟಕ ವೀರರೆ" ಲೇಖನವು ಬ್ರಿಟೀಷರ ನಿದ್ರೆಗೆಡಿಸಿತು ಎಂದರೆ ತಪ್ಪಾಗಲಾರದು.ಮೊಹರೆಯವರ ಅನನ್ಯ ದೇಶಭಕ್ತಿಯನ್ನು ಅಭಿನಂದಿಸಲು ವಿಜಾಪುರದ ಛತ್ರೆ ಚಿತ್ರಮಂದಿರದಲ್ಲಿ (ಈಗಿನ ತ್ರಿಪುರಸುಂದರಿ ) ಕೌಜಲಗಿ ಹಣಮಂತರಾಯರ ಅಧ್ಯಕ್ಷತೆಯಲ್ಲಿ ಸೇರಿದ ಸಭೆಯಲ್ಲಿ ಪುರೊಹಿತ ತಮ್ಮಣ್ಣಾಚಾರ್ಯರ್ಯರು ಚಳುಅಳಿಯ ಹರಿಕಾರ ಮೊಹರೆ ಹಣಮಂತರಾಯರ ಖಟ್ಲೆಯ ವಿವರಗಳನ್ನು ನೀಡಿದರು, ಶ್ರೀ ಸಾಲಿ ರಾಮಚಂದ್ರರಾಯರು ಗೊತ್ತುವಳಿಯನ್ನು ಮಂಡಿಸಿದರು. ೧೯೨೫ ರಲ್ಲಿ ಸ್ವರಾಜ್ಯ ಆಶ್ರಮದಿಂದ ಹಿಂದಿರುಗಿದ ನಂತರ ಕರ್ನಾಟಕ ವೈಭವದ ಸಂಪಾದಕರಾಗಿ ಮುಂದುವರೆದರು.ಮೊಹರೆ ಹಣಮಂತರಾಯರು ಕರ್ನಾಟಕ ವೈಭವನ್ನು ಜನಪ್ರೀಯಗೊಳಿಸಲು " ಅಪ್ಪಾಭಟ್ಟರ ಹೊತ್ತಿಗೆ " ಅಂಕಣವನ್ನು ಬರೆಯುತ್ತಿದ್ದರು.ಸಾತಂತ್ರ್ಯ ಚಳುವಳಿ, ರಾಜಕೀಯ,ದೈನಂದಿನ ಸ್ಥಳೀಯ ಮತ್ತು ಸುತ್ತಮುತ್ತ ನಡೆಯುವ ಘಟನೆಗಳು ಅಪ್ಪಾಭಟ್ಟರ ಹೊತ್ತಿಗೆಯಲ್ಲಿ ಮೂಡಿ ಬರುತ್ತಿದ್ದವು.ಪತ್ರಿಕೆಗಳಮೇಲೆ ಗದಾಪ್ರಹಾರವನ್ನು ತಡೆಯುವದಕ್ಕೊಸ್ಕರ ಕರ್ನಾಟಕ ಪತ್ರಿಕೋದ್ಯಮ ಪರಿಷತ್ತನ್ನು ಸ್ಥಾಪಿಸುವ ಅವರ ಕನಸನ್ನು ನನಸಾಗಿ ಮಾಡಲು ಪ್ರಯತ್ನಿಸಿದರು.೧೯೨೮ ರಲ್ಲಿ ಕರ್ನಾಟಕ ಪತ್ರಿಕೋದ್ಯಮ ಪ್ರಥಮ ಪರಿಷತ್ತಿನ ಕಾರ್ಯದರ್ಶಿಯ ಹೊಣೆಯನ್ನು ಹೊತ್ತುಕೊಂಡು ಪ್ರಸಿಧ್ಧ ಪತಿಕೋದ್ಯಮಿ ಡಿ ವ್ಹಿ ಗುಂಡಪ್ಪ ರವರ ಅಧ್ಯಕ್ಷತೆಯಲ್ಲಿ ಪರಿಷತ್ತಿನ ಅಧಿವೇಶನವನ್ನು ಬಾಗಲಕೋಟೆಯಲ್ಲಿ ನೆರವೇರಿಸಿದರು. "===ಸಂಯುಕ್ತ ಕರ್ನಾಟಕ ===" ೧೯೨೦ ರಲ್ಲಿ ಲೋಕಮಾನ್ಯ ತಿಲಕರು ನಿಧನರಾದರು.ಸ್ವಾತಂತ್ರ್ಯ ಆಂದೋಲನವನ್ನು ಮಹಾತ್ಮ ಗಾಂಧೀಜಿಯವರು ವಹಿಸಿಕೊಂಡನಂತರ ಆಳರಸರ (ಬ್ರಿಟೀಷರು) ಜೊತೆಗೆ ಅಸಹಕಾರ ಆಂದೋಲನದೊಂದಿಗೆ ಸಂಘರ್ಷಕ್ಕೆ ಇಳಿದರು. ಕಾಂಗ್ರೆಸ್ ಪಛವನ್ನು ಬಲಪಡಿಸಲು ಪ್ರತಿಯೊಂದು ರಾಜ್ಯದಲ್ಲಿ ಪಕ್ಷ , ಸಮೀತಿಗಳನ್ನು ರಚಿಸಲಾಯಿತು. ೧೯೨೪ರಲ್ಲಿ ಬೆಳಗಾವಿಯ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ಮಹಾತ್ಮ ಗಾಂಧೀಜೆಯವರು ವಹಿಸಿದ್ದರು. "===ಆಧಾರ===" ೧. ಪತ್ರಕರ್ತರಾಗಿ ಮೊಹರೆ ಹಣಮಂತರಾಯ ಒಂದು ಅಧ್ಯಯನ" ಡಾ. ಜೆ.ಎಂ. ಚಂದುನವರ ೨. ಮೊಹರೆ ಹಣಮಂತರಾಯರು ಡಾ. ಬಿ ಆರ್ ನಾಡಗೌಡ